ರಾಮಾನುಜಾಚಾರ್ಯರ ವಿರುದ್ಧ ದ್ವೇಷ ಸಾಧಿಸಿ, ವೈಷ್ಣವ ವಿರೋಧಿಗಳೆಂಬ ಅಪಖ್ಯಾತಿಗೆ ಗುರಿಯಾದ ಚೋಳರು ಈ ಅಪವಾದದಿಂದ ಪಾರಾಗುವ ಸಲುವಾಗಿ ತಮ್ಮ ಕಾಲದ ಹಲವು ದೇಗುಲನಿರ್ಮಿತಿಗಳಲ್ಲಿ ವಿಷ್ಣುವಿನ ರೂಪಗಳಿಗೂ ಸ್ಥಾನ ಕಲ್ಪಿಸುವ ಉದ್ದೇಶ ಹೊಂದಿದ್ದಂತೆ ತೋರುತ್ತದೆ. ಈ ಉದ್ದೇಶಕ್ಕೆ ತಕ್ಕಂತೆಯೇ ಬಿನ್ನಮಂಗಲದ ದೇವಾಲಯ ರೂಪುಗೊಂಡಿರುವುದನ್ನು ಕಾಣಬಹುದು. ಈ ದೇಗುಲದ ಹೊರಗೋಡೆಗಳ ಮೇಲೆ ಕೆತ್ತಿರುವ ಶಿಲ್ಪಗಳಲ್ಲಿ ಶಿವಸಂಬಂಧವಾದ ಶಿಲ್ಪಗಳಿಗೆ ನೀಡಿರುವಷ್ಟೇ ಪ್ರಾಶಸ್ತ್ಯವನ್ನು ವಿಷ್ಣುಸಂಬಂಧಿ ರೂಪಗಳಿಗೂ ನೀಡಲಾಗಿದೆ. ಗುಡಿಯ ಬಾಗಿಲ ಅಕ್ಕಪಕ್ಕದಲ್ಲಿ ಸೂರ್ಯನ ಮೂರ್ತಿಯಿದೆ. ಎಡದಿಂದ ಸುತ್ತುಬರುವಾಗ ಮೊದಲಿಗೆ ಕೊಳಗದ ಕಿರೀಟ ಧರಿಸಿದ ಗಣಪತಿಯ ದರ್ಶನ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ತೊಂದನೆಯ ಕಂತು

 

ಒಂದು ಸಾವಿರ ವರ್ಷಗಳಿಗಿಂತ ಹಳೆಯದಾದ ದೇಗುಲವೊಂದು ಬೆಂಗಳೂರಿಗೆ ಅತಿ ಸಮೀಪದಲ್ಲಿಯೇ ಕಾಣಸಿಗುತ್ತದೆ. ತುಮಕೂರಿನತ್ತ ಸಾಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇಪ್ಪತ್ತು ಕಿಲೋಮೀಟರ್ ದೂರದಲ್ಲಿನ ನೆಲಮಂಗಲಕ್ಕೆ ಹೊಂದಿಕೊಂಡಂತಿರುವ ಬಿನ್ನಮಂಗಲದ ಮುಕ್ತೇಶ್ವರ ದೇವಾಲಯದ ಕಾಲ ಕ್ರಿ.ಶ. ಹತ್ತನೆಯ ಶತಮಾನ. ಆಗ ಈ ಪ್ರಾಂತ್ಯವನ್ನು ಆಳುತ್ತಿದ್ದ ಅರಸರು ತಮಿಳುನಾಡಿನ ಚೋಳರು. ರಾಜೇಂದ್ರ ಚೋಳನ ಕಾಲದಲ್ಲಿ ನಿರ್ಮಿತವಾಗಿರುವುದೆಂದು ಹೇಳಲಾದ ಈ ಮುಕ್ತೇಶ್ವರ ದೇವಾಲಯವನ್ನು ಪುರಾತತ್ತ್ವ ಇಲಾಖೆ ಜೀರ್ಣೋದ್ಧಾರ ಮಾಡಿ, ಇತಿಹಾಸದ ಮಹತ್ವದ ಕೊಡುಗೆಯೊಂದನ್ನು ರಕ್ಷಿಸಿದೆ. ಈ ಕಾರ್ಯದಲ್ಲಿ ಖ್ಯಾತ ಪುರಾತತ್ತ್ವ ವಿದ್ವಾಂಸ ಡಾ. ಹೆಚ್. ಎಸ್. ಗೋಪಾಲರಾಯರಂಥ ಸ್ಥಳೀಯರೂ ಇಲಾಖೆಯೊಂದಿಗೆ ಕೈಜೋಡಿಸಿರುವುದೊಂದು ವಿಶೇಷ.


ರಾಮಾನುಜಾಚಾರ್ಯರ ವಿರುದ್ಧ ದ್ವೇಷ ಸಾಧಿಸಿ, ವೈಷ್ಣವ ವಿರೋಧಿಗಳೆಂಬ ಅಪಖ್ಯಾತಿಗೆ ಗುರಿಯಾದ ಚೋಳರು ಈ ಅಪವಾದದಿಂದ ಪಾರಾಗುವ ಸಲುವಾಗಿ ತಮ್ಮ ಕಾಲದ ಹಲವು ದೇಗುಲನಿರ್ಮಿತಿಗಳಲ್ಲಿ ವಿಷ್ಣುವಿನ ರೂಪಗಳಿಗೂ ಸ್ಥಾನ ಕಲ್ಪಿಸುವ ಉದ್ದೇಶ ಹೊಂದಿದ್ದಂತೆ ತೋರುತ್ತದೆ. ಈ ಉದ್ದೇಶಕ್ಕೆ ತಕ್ಕಂತೆಯೇ ಬಿನ್ನಮಂಗಲದ ದೇವಾಲಯ ರೂಪುಗೊಂಡಿರುವುದನ್ನು ಕಾಣಬಹುದು. ಈ ದೇಗುಲದ ಹೊರಗೋಡೆಗಳ ಮೇಲೆ ಕೆತ್ತಿರುವ ಶಿಲ್ಪಗಳಲ್ಲಿ ಶಿವಸಂಬಂಧವಾದ ಶಿಲ್ಪಗಳಿಗೆ ನೀಡಿರುವಷ್ಟೇ ಪ್ರಾಶಸ್ತ್ಯವನ್ನು ವಿಷ್ಣುಸಂಬಂಧಿ ರೂಪಗಳಿಗೂ ನೀಡಲಾಗಿದೆ.

ಗುಡಿಯ ಬಾಗಿಲ ಅಕ್ಕಪಕ್ಕದಲ್ಲಿ ಸೂರ್ಯನ ಮೂರ್ತಿಯಿದೆ. ಎಡದಿಂದ ಸುತ್ತುಬರುವಾಗ ಮೊದಲಿಗೆ ಕೊಳಗದ ಕಿರೀಟ ಧರಿಸಿದ ಗಣಪತಿಯ ದರ್ಶನ. ಮುಂದೆ ಕಾಣಸಿಗುವ ನಟರಾಜ, ಚಂದ್ರಶೇಖರ ಹಾಗೂ ಭೈರವನ ರೂಪಗಳು ಚೋಳರ ಶಿಲ್ಪಶೈಲಿಗೆ ಉತ್ತಮ ನಿದರ್ಶನಗಳು. ಎರಡೆರಡು ಕಂಬಗಳ ನಡುವೆ ಒಂದೊಂದು ಮೂರ್ತಿಯಿರುವಂತೆ ವಿನ್ಯಾಸ ಮಾಡಿರುವುದರಿಂದ ಶಿಲ್ಪಗಳು ಪ್ರತ್ಯೇಕ ಕೋಷ್ಠಗಳಲ್ಲಿರುವಂತೆ ಭಾಸವಾಗುತ್ತದೆ. ಈ ಕಂಬಗಳನ್ನೂ ಅವುಗಳ ಮೇಲುಭಾಗದ ಪ್ರಭಾವಳಿಯ ವಿನ್ಯಾಸವನ್ನೂ ವಿಭಿನ್ನವಾಗಿ ರೂಪಿಸಿದ್ದು ದೇಗುಲದ ಗೋಡೆಯಿಂದ ಹೊರಗೆ ಚಾಚಿಕೊಂಡಂತೆ ಮಾಡಿರುವುದು ದೇಗುಲದ ಅಂದವನ್ನು ಹೆಚ್ಚಿಸಿದೆ.

ಈ ಎಲ್ಲ ಮುಖ್ಯದೇವತಾಶಿಲ್ಪಗಳ ಬದಿಯ ಕಂಬಗಳ ಮೇಲೆ ಚಾಮರಧಾರಿ ಇಲ್ಲವೇ ಕೈಮುಗಿದು ನಿಂತ ಭಕ್ತ ಪರಿವಾರದ ರೂಪಗಳಿವೆ. ಹಲವು ಶಿಲ್ಪಗಳ ಮೇಲುಭಾಗದಲ್ಲಿ ಪ್ರಭಾವಳಿಯಂತಹ ರಚನೆಗಳಿವೆ. ಅವುಗಳ ಆಚೀಚೆಗೆ ಕಂಬವನ್ನು ಹೊತ್ತುಕೊಂಡಂತೆ ತೋಳೆತ್ತಿದ ಯಕ್ಷರೂಪಗಳೂ ಮುಂಗಾಲೆತ್ತಿ ನಿಂತ ಸಿಂಹಗಳೂ ಗುಡಿಯ ಸುತ್ತಲೂ ಕಾಣುತ್ತವೆ. ಮೇಲುಗೋಡೆಯ ಕೈಪಿಡಿ ಸರಳವಾಗಿದ್ದು ಸಮಾನ ಅಂತರದಲ್ಲಿ ಸಿಂಹಮುಖಗಳನ್ನು ಕೆತ್ತಲಾಗಿದೆ.

ಗರ್ಭಗುಡಿಯ ಹಿಂಭಾಗದ ಹೊರಗೋಡೆಯ ಮೇಲಿರುವ ವೆಂಕಟೇಶ್ವರನ ಶಿಲ್ಪ ಸ್ವಾರಸ್ಯಕರವಾಗಿದೆ. ವೆಂಕಟೇಶನ ಪ್ರಾಚೀನ ಶಿಲ್ಪಗಳಲ್ಲಿ ಇದೂ ಒಂದು. ತಿರುಪತಿಯಲ್ಲಿರುವಂತೆಯೇ ಕೊಳಗದ ಕಿರೀಟವನ್ನು ಶಂಖಚಕ್ರಗಳನ್ನೂ ಧರಿಸಿದ ವೆಂಕಟೇಶನಿಗೆ ಹಣೆಗಣ್ಣು ಇರುವುದು ವಿಶೇಷ. ಗುಡಿಯ ಇನ್ನೊಂದು ಬದಿಯಲ್ಲಿ ಚತುರ್ಮುಖ ಬ್ರಹ್ಮ, ಮಹಿಷಮರ್ದಿನಿ, ವೇಣುಗೋಪಾಲ, ಕಾಳಿಂಗಮರ್ದನ ಕೃಷ್ಣರ ಶಿಲ್ಪಗಳು ಗಮನಸೆಳೆಯುತ್ತವೆ. ಇಂದ್ರನ ಗೈರುಹಾಜರಿಯಲ್ಲಿ ಐರಾವತವನ್ನೇರಿ ಹೊರಟ ಶಚೀದೇವಿಯ ಶಿಲ್ಪವೂ ಇದೆ.

ಕಟ್ಟಡದ ಮುಂಭಾಗದಲ್ಲಿ ಎರಡೂ ಕಡೆ ಸೂರ್ಯನ ಶಿಲ್ಪಗಳಿವೆ. ಮುಖಮಂಟಪದ ಕಂಬಗಳ ಮೇಲೆ ಗಣಪತಿ, ನಾಟ್ಯಶಿವ ಮೊದಲಾದ ಬಿಂಬಗಳನ್ನು ಕೆತ್ತಲಾಗಿದೆ. ಒಳಗಿನ ನವರಂಗದ ಕಂಬಗಳ ವಿನ್ಯಾಸ ಆಕರ್ಷಕವಾಗಿದ್ದು ಇವನ್ನು ಗಂಗರಾಜರ ಕಾಲದಲ್ಲಿ ನಿರ್ಮಿಸಿರಬಹುದೆಂದು ಹೇಳಲಾಗಿದೆ. ಶಿವನಿಗೆ ಅಭಿಮುಖವಾಗಿರುವ ನಂದಿಯ ವಿಗ್ರಹ ಚಿಕ್ಕದಾಗಿದ್ದರೂ ಚೊಕ್ಕವಾಗಿದೆ. ನವರಂಗದ ಮೇಲಿನ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ರೂಪಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ನಿತ್ಯಪೂಜೆ ಸಲ್ಲುತ್ತಿದೆ. ಗುಡಿಯ ಹೊರಭಾಗದ ಬಯಲಲ್ಲಿ ದೇವರೆಡೆಗೆ ಕೈಮುಗಿದು ನಿಂತ ರಾಜಪುರುಷನೊಬ್ಬನ ಪ್ರತಿಮೆಯಿದ್ದು ಇದು ರಾಜೇಂದ್ರಚೋಳನ ವಿಗ್ರಹವೇ ಇರಬೇಕೆಂದು ಕೆಲವರ ಅಭಿಪ್ರಾಯ. ದೇಗುಲದ ಅಂಗಳದಲ್ಲಿ ಚೋಳರ ಕಾಲದ ತಮಿಳು ಶಾಸನವೊಂದಿದ್ದು ಇದು ಸಾವಿರ ವರ್ಷಗಳಷ್ಟು ಪುರಾತನವಾದ ದಾಖಲೆಯಾಗಿದೆ.

ಬೆಂಗಳೂರಿನ ಸನಿಹದಲ್ಲಿ ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲೇ ಇರುವ ಈ ಪುರಾತನ ದೇಗುಲಕ್ಕೆ ತಪ್ಪದೆ ಭೇಟಿಕೊಟ್ಟು ಚೋಳರ ಕಾಲದ ಶಿಲ್ಪಕಲೆಯ ಪರಿಚಯ ಪಡೆದುಕೊಳ್ಳಲು ಮರೆಯಬೇಡಿ.