ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಕೆರೀಬಿಯನ್ನರ ಮೋಡಿ; ರೂಟ್‌ ಶತಕ, ಆಂಗ್ಲರಿಗೆ 8 ವಿಕೆಟ್‌ಗಳ ಜಯ

ವಿಶ್ವಕಪ್‌ ಕ್ರಿಕೆಟ್‌
Last Updated 14 ಜೂನ್ 2019, 17:00 IST
ಅಕ್ಷರ ಗಾತ್ರ

ಸೌತಾಂಪ್ಟನ್:ರೋಸ್ ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಬೌಲರ್‌ಗಳ ಶಿಸ್ತಿನ ದಾಳಿಗೆ ಕುಸಿದ ಕೆರೀಬಿಯನ್‌ ಬ್ಯಾಟಿಂಗ್‌ ಪಡೆ 213ರನ್‌ ಗುರಿ ನೀಡಿತು. ವೆಸ್ಟ್‌ ಇಂಡೀಸ್‌ ಸವಾಲು ಯಾವ ಹಂತದಲ್ಲಿಯೂ ಆಂಗ್ಲರಿಗೆ ಕಠಿಣವಾಗಲೇ ಇಲ್ಲ. ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿದರು.

ಜಾನಿ ಬೆಸ್ಟೊ ಮತ್ತು ಜೋ ರೂಟ್‌ ಆರಂಭಿಕ ಜೋಡಿ ಉತ್ತಮ ಜತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಜೇಸನ್‌ ರಾಯ್‌ ಗಾಯಗೊಂಡಿದ್ದರಿಂದ ಜೋ ರೂಟ್‌ ಎರಡನೇ ಕ್ರಮಾಂಕದಲ್ಲಿ ಆಡಿದರು. 95 ರನ್‌ ಕಲೆ ಹಾಕಿದ್ದ ಮೊದಲ ಜತೆಯಾಟವನ್ನು ಶಾನನ್‌ ಗೇಬ್ರಿಯಲ್‌ ಮುರಿದರು. 45 ರನ್‌(46 ಎಸೆತ; 7 ಬೌಂಡರಿ) ಗಳಿಸಿದ್ದ ಬೆಸ್ಟೊ ಕ್ಯಾಚ್‌ ನೀಡಿ ಹೊರನಡೆದರು.

ಕ್ಷಣಕ್ಷಣದ ಸ್ಕೋರ್‌:https://bit.ly/2ZqxavY

ಉತ್ತಮ ಫಾರ್ಮ್‌ನಲ್ಲಿ ಜೋ ರೂಟ್‌ಗೆ ಜತೆಯಾದ ಕ್ರಿಸ್‌ ವೋಕ್ಸ್‌ ತಾಳ್ಮೆಯುತ ಆಟವಾಡಿದರು. ಶತಕ ದಾಟಿದ ಇಬ್ಬರ ಜತೆಯಾಟದಿಂದ ಇಂಗ್ಲೆಂಡ್‌ ಬಹುಬೇಗ ಗೆಲುವಿನ ಗುರಿ ಸಮೀಪಿಸಿತು. ರೂಟ್‌ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಎರಡನೇ ಶತಕ ಪೂರೈಸಿದರು. 93 ಎಸೆತಗಳಲ್ಲಿ 100ರನ್‌(11 ಬೌಂಡರಿ) ಸಿಡಿಸಿದರು.

ವೋಕ್ಸ್‌ 4 ಬೌಂಡರಿ ಸಹಿತ 40 ರನ್‌ ಮಾಡಿದರು.ಶಾನನ್‌ ಗೇಬ್ರಿಯಲ್‌ ಎಸೆತದಲ್ಲಿಯೇ ವೋಕ್ಸ್‌ ಸಹ ಕ್ಯಾಚ್‌ ನೀಡಿದರು. ಬೌಲಿಂಗ್‌ನಲ್ಲಿಯೂ ಮಿಂಚಿದ ವೋಕ್ಸ್‌, 5 ಓವರ್‌ಗಳಲ್ಲಿ 16 ರನ್‌ ನೀಡಿ 1 ವಿಕೆಟ್‌ ಪಡೆದರು.

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆನ್‌ ಸ್ಟೋಕ್ಸ್‌(10 ರನ್‌) ರೂಟ್‌ರೊಂದಿಗೆ ಜಯದ ನಗೆ ಬೀರಿದರು. ಇಂಗ್ಲೆಂಡ್‌ 33.1 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿಸುವ ಮೂಲಕ 8 ವಿಕೆಟ್‌ ಜಯ ಸಾಧಿಸಿತು.

ಈ ಗೆಲುವಿನ ಮೂಲಕ 6 ಪಾಯಿಂಟ್‌ ಗಳಿಸಿರುವ ಇಂಗ್ಲೆಂಡ್‌,ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೊದಲ ಬ್ಯಾಟಿಂಗ್‌ ಮಾಡಿದವೆಸ್ಟ್ ಇಂಡೀಸ್‌ 44.4 ಓವರ್‌ಗಳಲ್ಲಿ ಸರ್ವ ಪತನ ಕಂಡು 212 ರನ್‌ ಗಳಿಸಿತು.ಕ್ರಿಸ್‌ ವೋಕ್ಸ್‌ ಆರಂಭದಲ್ಲಿಯೇ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡಿದರು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ನಿಕೊಲಸ್‌ ಪೂರನ್‌ ಆಸರೆಯಾದರು.ಬಹುಬೇಗ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಿಮ್ರೊನ್‌ ಹೆಟ್ಮೆಯರ್‌(39) ಮತ್ತು ನಿಕೊಲಸ್‌ ಪೂರನ್‌(63) ಜತೆಯಾಟ ನೆರವಾಯಿತು.

ಆ್ಯಂಡ್ರೆ ರಸೆಲ್‌ 21 ರನ್‌, ಕ್ರಿಸ್‌ ಗೇಲ್‌ 36 ಗಳಿಸಿದ್ದು ಬಿಟ್ಟರೆ ತಂಡದ ಉಳಿದ ಆಟಗಾರರು ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು.ಇಂಗ್ಲೆಂಡ್‌ ಪರ ಮಾರ್ಕ್‌ ವುಡ್‌ ಮತ್ತು ಆರ್ಚರ್‌ ತಲಾ 3 ವಿಕೆಟ್‌; ಜೋ ರೂಟ್‌ 2 ಹಾಗೂ ಕ್ರಿಸ್‌ ವೋಕ್ಸ್‌ ಮತ್ತು ಲಿಯಾಮ್‌ ಫ್ಲಂಕೆಟ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT