ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ, ಸಾಂಗತ್ಯದಲ್ಲೇ. ಅದು ಹರಿಣಾಕ್ಷಿಯ ಬದುಕಿಗೆ ಒಂದು ಸುಪ್ತ ಸಾಪೇಕ್ಷವನ್ನೊದಗಿಸುವಂತೆ ಮೂಡಿಬಂದಿರುವುದರಲ್ಲೇ ಈ ಭಾಗದ ಒಟ್ಟಾರೆ ಸಾರ್ಥಕತೆಯಿದೆ. ಕೊಂಚ ರೂಪಕದ ಭಾಷೆಯಲ್ಲಿ, ಪ್ರತಿಮಾ ವಿಧಾನವನ್ನು ನೆಚ್ಚಿಕೊಂಡು ಸುಂದರವಾಗಿ ಮೂಡಿ ಬಂದಿರುವ ಈ ಭಾಗದಲ್ಲಿ ಗಂಗೆ, ಕಾಶಿ, ಮೃತ್ಯುಪ್ರಜ್ಞೆ, ಆಧ್ಯಾತ್ಮ ಎಲ್ಲವೂ ಮೇಳೈಸಿದೆ.
ಅನುಪಮಾ ಪ್ರಸಾದ್ ಬರೆದ “ಪಕ್ಕಿಹಳ್ಳದ ಹಾದಿಗುಂಟ” ಕಾದಂಬರಿಗೆ ನರೇಂದ್ರ ಪೈ ಬರೆದ ಮುನ್ನುಡಿ

 

ಮೂರು ಕಥಾಸಂಕಲನಗಳ ನಂತರ ಅನುಪಮಾ ಪ್ರಸಾದ್ ಇದೀಗ ತಮ್ಮ ಮೊತ್ತಮೊದಲ ಕಾದಂಬರಿಯನ್ನು ಬರೆದು ಮುಗಿಸಿದ್ದಾರೆ. ಅವರ ಪ್ರತಿಯೊಂದು ಸಂಕಲನಕ್ಕೂ ಅದೂ ಇದೂ ತಕರಾರು ತೆಗೆಯುತ್ತಿದ್ದ ನನ್ನನ್ನು ಅವರು ಸಹಿಸಿದ್ದು ವಿಶೇಷ! ಈ ಬಾರಿ ಅವರು ನನಗೆ ನಿಜಕ್ಕೂ ಸವಾಲೊಡ್ಡಿದ್ದಾರೆ. ತಕರಾರುಗಳಿದ್ದರಷ್ಟೇ ಬರೆಯಲು ಇಷ್ಟಪಡುವ ನನ್ನ ಬಾಯಿ ಮುಚ್ಚಿಸುವಂಥ ಒಂದು ಅದ್ಭುತ ಕಾದಂಬರಿಯನ್ನು ಕೈಗಿಟ್ಟಿದ್ದಾರೆ. ಹಾಗಾಗಿ, ಇದು ನನಗೆ ನಿಜಕ್ಕೂ ಇಷ್ಟವಾಗಿದ್ದರ, ಸವಾಲೊಡ್ಡಿದ್ದರ ಕಾರಣಗಳನ್ನೇ ಹುಡುಕುತ್ತ ಹೋದರೆ ಅಂಥದ್ದೇನಾದರೂ ಸಿಗಬಹುದೆಂಬ ನಂಬಿಕೆಯಿಂದ ಹೊರಟಿದ್ದೇನೆ!

ಹತ್ತಿರದಿಂದ ಒಂದು ಕುಟುಂಬದ ಎರಡು ಮೂರು ತಲೆಮಾರಿನ ಬದುಕು, ಬವಣೆಯನ್ನು ಕಂಡಿದ್ದರೆ ಒಂದು ಕಾದಂಬರಿ ಬರೆಯುವುದು ನುರಿತ ಬರಹಗಾರರಿಗೆ ಅಷ್ಟೇನೂ ಕಷ್ಟವಾಗಲಾರದು. ಏಕೆಂದರೆ ಒಬ್ಬ ಬರಹಗಾರನ ದೊಡ್ಡ ಅನುಕೂಲವೇನೆಂದರೆ ಅವನು ಕಂಡಿದ್ದಕ್ಕೆಲ್ಲ ಸ್ಪಂದಿಸಿ, ತನ್ನನ್ನು ತಾನು ಕೊಟ್ಟುಕೊಂಡು, ಅದನ್ನು ತನ್ನಲ್ಲೇ ಆವಾಹಿಸಿಕೊಂಡು ಬದುಕಬಲ್ಲ. ಹಾಗಾಗಿ ಒಬ್ಬ ಬರಹಗಾರನಿಗೆ ಹಲವು ಜೀವನಗಳಿರುತ್ತವೆ. ಅವನು ಹಲವರ ಬದುಕನ್ನು, ಅದರ ಸಂಘರ್ಷವನ್ನು ತನ್ನದೇ ಎಂಬಂತೆ ತಲೆಯಲ್ಲಿ ಹೊತ್ತು ಬದುಕುತ್ತಿರುವುದರಿಂದಲೇ ಜೀವನವನ್ನು, ಮನುಷ್ಯನನ್ನು ಮತ್ತು ಮನಸ್ಸನ್ನು ಅವನು ಹೆಚ್ಚು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಲ್ಲ, ಪೂರ್ಣವಾಗಿ ಅನುಭವಿಸಬಲ್ಲ. ಆದರೆ ಹಾಗೆ ಬದುಕಿದ್ದು, ಅನುಭವಿಸಿದ್ದು, ಸ್ಪಂದಿಸಿದ್ದು ಎಲ್ಲ ಅಕ್ಷರವಾಗಿ ಹಾಳೆಯ ಮೇಲೆ ಮೂಡುವುದಕ್ಕೆ ಬೇರೆಯೇ ಪರಿಶ್ರಮ ಬೇಕಾಗುತ್ತದೆ. ಅದು ಬೇರೆಯೇ ಒಂದು ಸಾಹಸ, ಸವಾಲು ಮತ್ತು ಸಾಧನೆ.

(ಅನುಪಮಾ ಪ್ರಸಾದ್)

ಭಾಷೆಗೆ ಮೀರಿದ್ದು ತುಂಬ ಇದೆ ಬದುಕಿನಲ್ಲಿ. ಪಂಚೇಂದ್ರಿಯಗಳಿಗೆ ಒದಗಬಹುದಾದ ಎಲ್ಲವನ್ನೂ ಮೀರಿದ್ದು ಕೂಡ ತುಂಬ ಇದೆ ಬದುಕಿನಲ್ಲಿ. ಆದರೆ ಅದನ್ನೆಲ್ಲ ಇನ್ನೊಂದು ಜೀವದ ಅನುಭವಕ್ಕೂ ಬರುವಂತೆ ಮಾಡಲು ಒಬ್ಬ ಸಾಹಿತಿಗೆ ಇರುವುದೆಲ್ಲಾ ಬರೀ ಭಾಷೆಯ ನೆರವೊಂದೇ. ‘ಹಕ್ಕಿಯಂತೆ ಹಾಡಲಾರದ, ಹಾರಲಾರದ’ ಯಕಃಶ್ಚಿತ್ ಮನುಷ್ಯ ತನ್ನ ಕಣ್ಣ ಪೊರೆಯ ಮೇಲೆ ಮೂಡಿದ ಒಂದು ವಿನ್ಯಾಸವನ್ನು ಇನ್ನೊಂದು ಜೀವಕ್ಕೆ ತೋರಿಸಲಾರ. ಅವನು ಇನ್ನೊಂದು ಜೀವಕ್ಕೆ ಬೆಟ್ಟು ಮಾಡಿ ತೋರಿಸಬಹುದಾದ್ದೆಲ್ಲ ಕಣ್ಣಿನ ಹೊರಗಿನ ನೋಟವನ್ನಷ್ಟೇ. ಕಣ್ಣಿನ ಒಳಗಿನ ನೋಟ, ಒಳಗಣ್ಣಿನ ನೋಟ ಎರಡೂ ಸಂವಹನದಲ್ಲಿ ಮುಕ್ಕಾಗುತ್ತದೆ. ಪ್ರತಿಬಿಂಬದ ನೆರವಿಲ್ಲದೆ ಸ್ವತಃ ತನ್ನನ್ನೇ ‘ಸತ್ಯ’ವಾಗಿ, ಪೂರ್ಣವಾಗಿ ಕಾಣಲು ಅವನಿಗೆ ಸಾಧ್ಯವಿಲ್ಲ. ಹಾಗಿದ್ದೂ ಏನೆಲ್ಲವನ್ನು ತೋರಿಸಲು ಭಾಷೆಯ ನೆರವೊಂದನ್ನೇ ಆಧಾರವಾಗಿಟ್ಟುಕೊಂಡು ಅವನು ಹೊರಡುತ್ತಾನೆ. ಅವನಿಗಿರುವ ಮಿತಿಗಳು ಹೆಚ್ಚು. ಅದನ್ನು ಮೀರುವ ಕೌಶಲ, ಕಲೆ, ಸಿದ್ಧಿ ಎಲ್ಲರಿಗೂ ಇರುವುದಿಲ್ಲ. ಅನುಪಮಾ ಏನು ಬರೆದರೂ ಅದನ್ನು ಓದಬೇಕು ಅನಿಸಲು ಇರುವ ಕಾರಣ ಅವರು ಇದೆಲ್ಲದರ ಬಗ್ಗೆ ಸೂಕ್ಷ್ಮವಾದ ಅರಿವಿರುವ, ಇಂಥ ಸಿದ್ಧಿ ತನ್ನದಾಗಬೇಕೆಂಬ ಅತೀವ ಹಂಬಲವುಳ್ಳ ಮತ್ತು ತಪಸ್ಸಿನ ಪಸೆಯಿರುವ ಸಾವಧಾನ, ತಾಳ್ಮೆ, ನಿಧಾನಗಳೆಲ್ಲ ಇರುವ ಕತೆಗಾರ್ತಿಯಾಗಿರುವುದು. ಇದನ್ನು ಇಲ್ಲಿನ ಪುಟಪುಟಗಳಲ್ಲೂ ನೀವು ಕಾಣುತ್ತೀರಿ, ಕಂಡುಕೊಳ್ಳುತ್ತೀರಿ.

ಇದು ಹಲವು ಸ್ತರಗಳ ಕಾದಂಬರಿ. ಮೊದಲಿಗೆ ಇದು ಒಂದೊ ಎರಡೊ ಕುಟುಂಬದ, ತಲೆಮಾರುಗಳ ಕತೆಯಂತೆ ಕಾಣುತ್ತದೆ. ಕುಂಬಳೆ ಸನಿಹದ ಆನಂದಮಠವನ್ನು ಬಿಟ್ಟು ದೇವನಗರಿಗೆ ಬರುವ ರಾಮಶರ್ಮರ ಕುಟುಂಬ, ಅಲ್ಲಿ ಅವರಿಗೆ ನೆರವಾಗುವ ಅಣ್ಣಯ್ಯ ಬಲ್ಲಾಳರ ಕುಟುಂಬ ಈ ಕಥಾನಕದ ಕೇಂದ್ರ ಎನಿಸುವಾಗಲೇ ಅದು ಕಮ್ಯುನಿಸಂ ತನ್ನ ಮೊದಲ ಹೆಜ್ಜೆಗಳನ್ನು ಊರಲು ನಡೆಸುವ ಪ್ರಯತ್ನಗಳಿಂದ, ಕನ್ನಡಪರ ಹೋರಾಟ ತೀವ್ರಗೊಳ್ಳುವ ವಿದ್ಯಮಾನಗಳಿಂದ ಅಥವಾ ಎಂಡೋಸಲ್ಫಾನ್ ದುರಂತದ ಮೂಲಕ ಇಡೀ ಕಾಸರಗೋಡು ಸೀಮೆಗೆ ಪಸರಿಸಿಕೊಳ್ಳುತ್ತದೆ. ಅದೇ ಕಾಲಕ್ಕೆ ಅದು ಜಯಂತ-ಹರಿಣಾಕ್ಷಿಯರ, ಮಹೇಂದ್ರ-ಸುಭಾಷಿಣಿಯರ, ಮುಕ್ತಾತಾಯಿ-ಜಯವಂತನ, ತಿಮ್ಮಪ್ಪ ಭಟ್ಟ – ಕಲ್ಯಾಣಮ್ಮನವರ, ಶಿವರಾಮನ ಮಾತ್ರವಲ್ಲ, ಇಂಥ ಇನ್ನೂ ಹಲವರ ವೈಯಕ್ತಿಕ ಬದುಕಿಗೂ ಮೊನಚುಗೊಂಡು ವ್ಯಕ್ತಿಗತ ನೆಲೆಯ ನೋಟವನ್ನೂ ಒದಗಿಸುತ್ತ ಸಾಗುತ್ತದೆ. ಏನಿಲ್ಲವೆಂದರೂ ಸುಮಾರು ಐವತ್ತರಷ್ಟು ಪಾತ್ರಗಳು ಇಲ್ಲಿನ ಪ್ರಧಾನ ಭೂಮಿಕೆಯಲ್ಲೇ ನಮ್ಮ ಗ್ರಹಿಕೆಗೆ ಬರುತ್ತವೆ. ಹೀಗೆ ಮಾಡುವಾಗ ಅದು ತನ್ನ ಪ್ರಾದೇಶಿಕ ಪರಿಸರದ ಚಿತ್ರ, ಅಲ್ಲಿನ ಜನಜೀವನದ ಸಂಸ್ಕಾರ, ಜಾತೀಯತೆ, ಕಟ್ಟುಪಾಡುಗಳು, ಭಾಷಾ ವೈವಿಧ್ಯ, ಶಾಲೆ, ಅಡುಗೆ, ಯಕ್ಷಗಾನ, ಕೋಲ, ಹರಕೆ, ಕೃಷಿ, ನಗರದ ಕಾರ್ಪೊರೇಟ್ ಜಗತ್ತು ಎಲ್ಲವನ್ನೂ ಸಹಜವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡೇ ಸಾಗುತ್ತದೆ ಎನ್ನುವುದನ್ನು ಗಮನಿಸಿದರೆ ಈ ಕಾದಂಬರಿಯ ಹರಹು ಮತ್ತು ಅದನ್ನು ನಿರ್ವಹಿಸಿದ ಬಗೆಯಿಂದ ಅದು ಪಡೆದುಕೊಳ್ಳುವ ಗುರುತ್ವ ಅಚ್ಚರಿ ಹುಟ್ಟಿಸುತ್ತದೆ. ಇಷ್ಟು ವಿಶಾಲವಾದ ಒಂದು ಜನಸಮುದಾಯವನ್ನು, ಪ್ರದೇಶವನ್ನು, ಹಲವು ಬದುಕುಗಳನ್ನು ಗಮನದಲ್ಲಿರಿಸಿಕೊಂಡು ಕಥಾನಕವನ್ನು ಹೆಣೆಯುವುದು ಸುಲಭದ ಕೆಲಸವಲ್ಲ. ಅದನ್ನು ಅನುಪಮಾ ಅತ್ಯಂತ ಸೊಗಸಾಗಿ ಮತ್ತು ಸಹಜವಾಗಿ ಮಾಡುತ್ತಾರೆ.

ಈ ಕಾದಂಬರಿ ಕಥಾನಕ ಪ್ರಧಾನವಾಗಿಯೇ ಇದೆ. ಒಂದಿಷ್ಟು ಮೌನ, ಒಂದಿಷ್ಟು ಅಂತರಂಗದ ಶೋಧ, ಒಂದಿಷ್ಟು ಸ್ವಗತ ಬೇಕೆಂದರೆ ಅದಿಲ್ಲಿ ಸಿಗುವುದು ತನ್ನದೇ ಆದ ಲಯದಲ್ಲಿ, ಕ್ರಮದಲ್ಲಿ. ಉದಾಹರಣೆಗೆ ರಾಮಶರ್ಮರು ತಮ್ಮ ಪತ್ನಿ ರಾಧಮ್ಮನ ಜೊತೆ ತಮ್ಮ ದಾಂಪತ್ಯದ ಪರಾಮರ್ಶನ ನಡೆಸುವ ಪ್ರಸಂಗವೊಂದಿದೆ ಇಲ್ಲಿ. ಮುಕ್ತಾತಾಯಿ ತನ್ನ ಸಹಪಾಠಿ, ಸಹವರ್ತಿ, ಸ್ನೇಹಿತ ಮತ್ತು ಬಾಳ ಸಂಗಾತಿ ಜಯವಂತನಿಂದಾಗಿ ತನ್ನ ಜೀವದ ಹಂಬಲವಾದ ಸಂಗೀತದಿಂದ ವಿಮುಖಳಾದ ಬಳಿಕ ತನ್ನದೇ ಬಗೆಯಲ್ಲಿ ಮನುಷ್ಯ ಸಂಬಂಧ ಮತ್ತು ಬದುಕು ಎರಡನ್ನು ಮುಖಾಮುಖಿಯಾಗಿಸಿ, ತೂಗಿ ಮಾಗುವುದಿದೆ. ಮಹೇಂದ್ರ-ಸುಭಾಷಿಣಿಯರು ತಾವು ಎಂದಿಗೂ ಮಕ್ಕಳನ್ನು ಹೊಂದದೇ ಇರುವಂಥ ನಿಷ್ಠುರ ನಿಲುವಿಗೆ ಬರುವ ಪ್ರಸಂಗವಿದೆ. ಇಂಥ ಇನ್ನಷ್ಟು ಉದಾಹರಣೆಗಳನ್ನು ಕೊಡಬಹುದು. ಆದರೆ ಎಲ್ಲೂ ಅದು ಕಥಾನಕದ ಚಲನೆಗೆ ಸ್ಥಾಗಿತ್ಯವೊಡ್ಡಿ ಅಂತರಂಗದ ಮೊನಲಾಗುಗಳಿಗೆ ಹೊರಳದಂತೆ ಅನುಪಮಾ ತಮ್ಮ ನಿರೂಪಣೆಯನ್ನು ಸಾಗಗೊಡುತ್ತಾರೆ. ಕತೆ ಸಾಗುತ್ತಲೇ ಇರುತ್ತದೆ, ಅದು ನಿಲ್ಲುವುದಿಲ್ಲ ಬದುಕಿನಂತೆಯೇ, ಹರಿವ ನದಿಯಂತೆಯೇ. ಎಲ್ಲಿಯೂ ಭಾರವೆನಿಸದ, ಸಹಜವಾದ ಬದುಕಿನ ನಡೆಯಂತೆ ಸಾಗುವ ಕಥಾನಕವು ಮುಗಿದಾಗಲೇ ಅದರ ಹರಹು, ವ್ಯಾಪ್ತಿ ಮತ್ತು ಗಹನತೆ ಅರಿವಿಗೆ ಬಂದು ಒಂದು ಸಾರ್ಥಕ ಭಾವ ಮೂಡಿಸುತ್ತದೆ, ಜಿಜ್ಞಾಸೆಗಳನ್ನೊಡ್ಡುತ್ತದೆ.

ಭಾವ ಜಗತ್ತಿನ ವೈಭವೀಕರಣಕ್ಕಿಂತ ಪ್ರಜ್ಞಾವಂತಿಕೆಯ ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡಿ ಕಥಾನಕವನ್ನು ನಡೆಸಿರುವ ವಿಧಾನವಿದೆಯಲ್ಲ, ಅದು ಕುತೂಹಲ ಮೂಡಿಸುತ್ತದೆ. ವಿಶೇಷತಃ ಭಾವುಕ ಸನ್ನಿವೇಶಗಳಿಂದ, ಎಲ್ಲೋ ಒಂದು ಕಡೆ ಓದುಗನ ಹೃದಯವನ್ನು, ಮನಸ್ಸಿನ ಸೂಕ್ಷ್ಮವನ್ನು ಕಾವ್ಯಮಯ ಭಾಷೆಯ ನಾದದಿಂದ ಮೀಟಿ ಓದುಗನನ್ನು ಸೆಳೆದುಕೊಳ್ಳುವ ಬರವಣಿಗೆಗೆ ವಿಶೇಷವಾದ ಮನ್ನಣೆ, ಆದರ ಸಿಗುತ್ತಿರುವ ದಿನಗಳಿಂದ ತೊಡಗಿ ಅವೆಲ್ಲ ಕ್ಲೀಷೆಯಾಗಿ ಬಿಟ್ಟ ಹಂತದ ವರೆಗಿನ ಸಾಹಿತ್ಯವನ್ನು ಕಾಣುವಾಗ ಇದು ಗಮನಾರ್ಹವಾದ ಒಂದು ಡೈವರ್ಷನ್ ಅನಿಸುತ್ತದೆ. ಮನುಷ್ಯನನ್ನು ಆರ್ದ್ರಗೊಳಿಸುವ, ಅವನ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ, ಅವನಲ್ಲಿನ ಸತ್ – ಅನ್ನು ಜಾಗೃತಗೊಳಿಸುವ ಮೂಲಕ ಅವನನ್ನು ಹೆಚ್ಚು ಹೆಚ್ಚು ಮನುಷ್ಯನನ್ನಾಗಿಸುವ ಸಾಹಿತ್ಯ ಸದಾ ಕಾಲ ಅಪೇಕ್ಷಣೀಯ ಎನ್ನುವಾಗಲೇ ಅವನ ಔದಾರ್ಯ, ಆದರ್ಶ ಮತ್ತು ಮುಕ್ತ ಮನಸ್ಸು ‘ಶಾಂತಿಕಾಲ’ದ ಮನಸ್ಥಿತಿಯಾಗಿಯೇ ಒದಗುವುದಲ್ಲದೆ ‘ಯುದ್ಧಕಾಲ’ದ ಮನಸ್ಥಿತಿಯಾಗಿ ಯಾವ ಓದುಗನಿಗೂ, ಸ್ವತಃ ಅಂಥ ಸಾಹಿತಿಗೂ ರಕ್ತಗತವಾಗುವುದೇ ಇಲ್ಲ ಎನ್ನುವ ಸತ್ಯವನ್ನು ನಾವು ಮರೆಯಬಾರದು. ಎಷ್ಟೇ ಓದಿ, ತಿಳಿದುಕೊಂಡು, ಜಾಣರಾಗಿದ್ದೇವೆಂದುಕೊಂಡರೂ ನಮ್ಮ ದುರ್ಬಲ ಘಳಿಗೆಯಲ್ಲಿ ನಮ್ಮ ತಿಳಿವು ಕೈಹಿಡಿಯುವುದಿಲ್ಲ, ಸ್ವಭಾವ ವಿಜೃಂಭಿಸುತ್ತದೆ ಎನ್ನುವುದೇ ನಿಜ. ಹಾಗಿದ್ದರೆ ನಮಗೆ ಮಹಾಭಾರತವೊಂದೇ ಸಾಕಿತ್ತು, ಮನುಷ್ಯ ಹೇಗೆ ಬಾಳ್ವೆ ನಡೆಸಬೇಕು ಎನ್ನುವುದನ್ನು ತಿಳಿದುಕೊಳ್ಳಲು. ಅತ್ಯಂತ ಮಾನವೀಯ ಕಳಕಳಿಯನ್ನು, ಹೃದಯವಂತಿಕೆಯನ್ನು, ಕಕ್ಕುಲಾತಿಯನ್ನು ಭಾಷೆಯಲ್ಲಿ ಕಲ್ಲು ಕೂಡ ಕರಗುವಂತೆ ಬರೆಯುವ ಸಾಹಿತಿ ಕೂಡ ತನ್ನ ಬದುಕಲ್ಲಿ ಕ್ರೌರ್ಯವನ್ನು, ಹಿಂಸೆಯನ್ನು, ಅಸೂಯೆಯನ್ನು, ಸಣ್ಣತನವನ್ನು ಎಷ್ಟರ ಮಟ್ಟಿಗೆ ಮೀರಿದ್ದಾನೆ ಎನ್ನುವುದನ್ನು ವಿವೇಚಿಸಿ ನೋಡಿದರೆ ಎಲ್ಲೋ ಇವೆಲ್ಲ ಸಂವೇದನೆಗಳೂ ಪ್ರಸಿದ್ಧಿಗೆ, ಲಾಭಕ್ಕೆ ಬಳಸಿಕೊಳ್ಳುವ ಸರಕುಗಳಾಗಿ ಬಿಟ್ಟಿವೆ ಅನಿಸುತ್ತದೆ. ಆ ನಿಟ್ಟಿನಲ್ಲಿ ಅನುಪಮಾ ಅವರ ನಿಲುವು ಗಮನಾರ್ಹವಾಗಿದೆ ಮಾತ್ರವಲ್ಲ ಕಾದಂಬರಿಯಲ್ಲಿ ಹರಿಣಾಕ್ಷಿ ತೆಗೆದುಕೊಳ್ಳುವ ಒಂದು ವಿಶಿಷ್ಟವಾದ ನಿರ್ಧಾರವನ್ನು ನಾವು ಈ ಹಿನ್ನೆಲೆಯಲ್ಲಿ ನೋಡುವುದು ಕೂಡ ಅಗತ್ಯವಾಗಿದೆ.

ಮೊದಲಿಗೆ ಇದು ಒಂದೊ ಎರಡೊ ಕುಟುಂಬದ, ತಲೆಮಾರುಗಳ ಕತೆಯಂತೆ ಕಾಣುತ್ತದೆ. ಕುಂಬಳೆ ಸನಿಹದ ಆನಂದಮಠವನ್ನು ಬಿಟ್ಟು ದೇವನಗರಿಗೆ ಬರುವ ರಾಮಶರ್ಮರ ಕುಟುಂಬ, ಅಲ್ಲಿ ಅವರಿಗೆ ನೆರವಾಗುವ ಅಣ್ಣಯ್ಯ ಬಲ್ಲಾಳರ ಕುಟುಂಬ ಈ ಕಥಾನಕದ ಕೇಂದ್ರ ಎನಿಸುವಾಗಲೇ ಅದು ಕಮ್ಯುನಿಸಂ ತನ್ನ ಮೊದಲ ಹೆಜ್ಜೆಗಳನ್ನು ಊರಲು ನಡೆಸುವ ಪ್ರಯತ್ನಗಳಿಂದ, ಕನ್ನಡಪರ ಹೋರಾಟ ತೀವ್ರಗೊಳ್ಳುವ ವಿದ್ಯಮಾನಗಳಿಂದ ಅಥವಾ ಎಂಡೋಸಲ್ಫಾನ್ ದುರಂತದ ಮೂಲಕ ಇಡೀ ಕಾಸರಗೋಡು ಸೀಮೆಗೆ ಪಸರಿಸಿಕೊಳ್ಳುತ್ತದೆ.

ತಲೆಮಾರುಗಳ ಕತೆಯನ್ನು ಹೇಳುವ ಕಾದಂಬರಿಯಾಗಿರುವುದರಿಂದ ಸಹಜವಾಗಿಯೇ ಇದು ಕಾಲಘಟ್ಟದ ದೃಷ್ಟಿಯಿಂದಲೂ ವಿಸ್ತಾರವಾದ ಹರಹು ಉಳ್ಳದ್ದು. ಅಣ್ಣಯ್ಯ ಬಲ್ಲಾಳರ ಮಗ ಧೂಮ ಬಲ್ಲಾಳರ ಮಗ ಶೇಖರ ಬಲ್ಲಾಳರ ಮಗ ರಜನೀಂದ್ರನ ತಲೆಮಾರಿನ ತನಕದ ಕತೆ ಇಲ್ಲಿರುವಂತೆಯೇ ರಾಮಶರ್ಮರ ಮಗ ಶಂಭು ಶರ್ಮರ ಮಗ ಶಿವರಾಮನ ಮಗ ಮಹೇಂದ್ರನ ತನಕದ ಕತೆಯೂ ಇಲ್ಲಿದೆ. ಅಷ್ಟು ಮಾತ್ರವಲ್ಲ, ಮಕ್ಕಳಿಂದ ತೊಡಗಿ ಎಲ್ಲ ವಯೋಮಾನದ ತುಡಿತ-ಮಿಡಿತಗಳನ್ನೂ ಸಂತುಲಿತಗೊಳಿಸಿದ ಒಂದು ಚಿತ್ರವನ್ನು ಕೊಡುತ್ತ ಸಾಗುವ ಸಮನ್ವಯತೆಯನ್ನೂ ಇದು ಸಾಧಿಸಿದೆ. ಇದರಾಚೆ ಬೇರೆ ಬೇರೆ ತಲೆಮಾರಿನಲ್ಲಿ ಜೊತೆಯಾಗುವ ಕೇಚ-ಮಾಚಿಯರ ಮಗ ಜಯಂತ, ಅಡ್ಕ ವಾಸುದೇವ, ಅಡೂರು ಗೋಪರಾಯರು, ಶಬರಾಯರು, ಅಬ್ದುಲ್ಲಾ ಹಾಜಿ, ತಿಮ್ಮಪ್ಪ ಭಟ್ಟರು, ಮುಕ್ತಾತಾಯಿಯರ ಕತೆಯೂ ಇಲ್ಲಿದೆ.

ಇಲ್ಲಿ ಬದುಕಿನ ಶೈಲಿ ಕಾಲಕಾಲಕ್ಕೆ ಬದಲಾಗುತ್ತ ಬಂದ ಒಂದು ಸುಂದರ ಚಿತ್ರವೂ ನಮಗೆ ಸಿಗುತ್ತದೆ. ಹೋಟೆಲು ಮುಚ್ಚಿ ಕೃಷಿಗೆ ಇಳಿದ ರಾಮಶರ್ಮರ ಮಗ ಶಂಭು ಭತ್ತದ ಬದಲು ಅಡಕೆ ಕೃಷಿಗೆ ಹೊರಳುವ ಮಾತನಾಡಿದಾಗ ರಾಮಶರ್ಮರಿಗೆ ಅದು ಪಥ್ಯವಾಗುವುದಿಲ್ಲ ಹೇಗೋ ಮುಂದೆ ಶೇಖರ ಬಲ್ಲಾಳರ ಮಗ ಮಹೇಶ ಹೊಲಕ್ಕೆ ಮಶೀನು ಇಳಿಸುವ, ರಬ್ಬರು ಬೆಳೆಸುವ ಮಾತನಾಡಿದಾಗಲೂ ಶಂಭು ಶರ್ಮರ ಮಗನ ಸಮಕಾಲೀನನಾದ ಶೇಖರ ಬಲ್ಲಾಳರಿಗೆ ಅದು ಪಥ್ಯವಾಗುವುದಿಲ್ಲ. ಇದೆಲ್ಲ ಹೀಗಿರುತ್ತ ಕ್ರಿಮಿನಾಶಕದ ಭಯಂಕರ ರುದ್ರತಾಂಡವ ಅದಾಗಲೇ ಆ ಸೀಮೆಯಲ್ಲಿ ಎಂಡೊಸಲ್ಫಾನ್ ಹೆಸರಿನಲ್ಲಿ ಸುರುವಾಗಿರುತ್ತದೆ. ಕೃಷಿ ಮಾತ್ರವಲ್ಲ, ಕಾಸರಗೋಡು ಸೀಮೆಯ ಕನ್ನಡ ಪರ ಹೋರಾಟ, ಕೇರಳದಲ್ಲಿ ಕಮ್ಯುನಿಸಂ ಚಳವಳಿ ಕಾಲಿಟ್ಟು ಭೂಹಿಡುವಳಿದಾರರನ್ನು ಕಂಗೆಡುವಂತೆ ಮಾಡತೊಡಗಿದ್ದು ಎಲ್ಲವೂ ಕಾದಂಬರಿಯ ಕಾಲಘಟ್ಟದಲ್ಲಿ ಸಹಜವಾಗಿ ಬಂದು ಹೋಗುತ್ತದೆ.

ಕೃಷಿ ಎಂದು ನೋಡಿದರೆ ಮಹೇಂದ್ರ-ಸುಭಾಷಿಣಿಯರ ಕಾಲಕ್ಕೆ ಕಾರ್ಪೊರೇಟ್ ಜಗತ್ತಿನ ವಿವರಗಳು ಕಾದಂಬರಿಯ ತೆಕ್ಕೆಯೊಳಕ್ಕೆ ಸೇರಿಕೊಳ್ಳುತ್ತವೆ. ಹಾಗೆಯೇ ಎಂಡೋಸಲ್ಫಾನ್ ದುರಂತದ ರಾಜಕೀಯ ಆಯಾಮಗಳೂ, ಕ್ಷೇತ್ರಮಾಹಿತಿ ಸಂಗ್ರಹದ ನಾಟಕಗಳೂ, ಜನರನ್ನು ತಪ್ಪುಹಾದಿಗೆಳೆಯುವ ಪ್ರಯತ್ನಗಳು ಹೇಗೆ ಸಾಗುತ್ತವೆ ಎನ್ನುವುದೂ ಕಾಣಿಸಿಗುತ್ತದೆ. ರೈತರಿಂದಲೇ ಅದು ಹಾನಿಕಾರಕವಲ್ಲ, ಅದರಿಂದ ಬೆಳೆಗೆ ಒಳ್ಳೆಯದಾಗಿದೆ ಎಂದು ಹೇಳಿಸುವ ಪ್ರಯತ್ನಗಳು, ಅದನ್ನು ಸಮರ್ಥಿಸುವ ವೈಜ್ಞಾನಿಕ ವಿತಂಡವಾದ ಎಲ್ಲ, ಸದ್ಯ ನಾವು ಬದುಕುತ್ತಿರುವ ಜಗತ್ತಿನ ವರ್ಚ್ಯುಯಲ್ ಸತ್ಯಗಳು ಮತ್ತು ವಾಸ್ತವ ಎರಡರ ನಡುವಿನ ಕಂದಕವನ್ನು ಬೆಚ್ಚಿ ಬೀಳುವಂತೆ ಕಣ್ಣೆದುರು ಇಡುತ್ತವೆ. ಆದರೆ ಕಾದಂಬರಿಯಲ್ಲಿ ಯಾವುದಕ್ಕೂ ವಿಶೇಷ ಮಹತ್ವ, ಕೇಂದ್ರವೆಂಬ ಭಾವನೆ ಒದಗದಂತೆ ಈ ವಿದ್ಯಮಾನಗಳು ಸಾಗುತ್ತವೆ. ಅದೇ ರೀತಿ ಈ ಕಾದಂಬರಿಗೆ ಕೇಂದ್ರ ಎನ್ನಬಹುದಾದಂಥ ಪಾತ್ರವಾಗಲಿ, ಕ್ಷೇತ್ರವಾಗಲಿ, ಪ್ರದೇಶವಾಗಲಿ ಇಲ್ಲ. ಹಾಗೆ ಇದೊಂದು ಊರಿನ ಜನಸಮುದಾಯವನ್ನೇ ಕೇಂದ್ರವಾಗಿಟ್ಟುಕೊಂಡು ಸಾಗುವ ಕಾದಂಬರಿ, ಏಕಕಾಲಕ್ಕೆ ಹಲವು ಪಾತಳಿಗಳಲ್ಲಿ ಸಮಾನವಾಗಿಯೂ ಸಮರ್ಥವಾಗಿಯೂ ಮಿಡಿಯುವಂಥದ್ದು.

ಆನಂದ ಮಠದ, ಪಾನಕಕಟ್ಟೆಯ ಮೂಲದಿಂದ ತೊಡಗಿ ತೊಟ್ಟಿಮನೆಯ ತಪ್ಪಲಿಗೆ ಬಂದ ಕಥಾನಕದ ಕಥಾಕ್ಷೇತ್ರ ಪುಣೆ, ಮುಂಬಯಿ, ಧಾರವಾಡ, ವಾರಣಾಸಿ ಎಂದೆಲ್ಲ ಹರಿಯುತ್ತ ಹಕ್ಕಿ ಹಳ್ಳದ ಹಾದಿ ಊರ್ಧ್ವಮುಖಿಯಾಗಿ ಗಂಗೆಯ ಮಡಿಲಿನ ತನಕ ಹರಿಯುತ್ತದೆ ಎನ್ನುವುದೂ ಒಂದು ವಿಶೇಷ. ಗಂಗೆ ನಮಗೆಲ್ಲ ತಿಳಿದಿರುವಂತೆ ಅಘನಾಶಿನಿ, ಪಾಪನಾಶಿನಿ. ಆದರೆ ಮನುಷ್ಯ ತನ್ನ ಪರಿಸರದ ಮೇಲೆ ನಡೆಸಿದ ನಿರಂತರ ಅತ್ಯಾಚಾರ, ಹಾನಿ, ಅತಿರೇಕಗಳಿಂದ ಅವಳ ಮೈಯ ನರನಾಡಿಗಳೂ ಕೊಳೆತು ನಾರುತ್ತಿವೆ. ಇದೇ ಒಂದು ರೂಪಕದಂತಿದೆ, ಮನುಷ್ಯನ ದುರಾಸೆ, ಸ್ವಾರ್ಥ ಮತ್ತು ಮುಂದಾಲೋಚನೆಯಿಲ್ಲದ ಅತಿರೇಕದ ವರ್ತನೆಗಳಿಗೆ.

(ನರೇಂದ್ರ ಪೈ)

ಹೇಗೆ ಈ ಮೈಯೆಲ್ಲ ಹೇಸಿಗೆ, ಕೊಚ್ಚೆಗಳ ಮುದ್ದೆಯಾಗಿ, ವೃಣಗಳ ಮೂಟೆಯಂತಾದ ಗಂಗೆಯನ್ನು ಸಾಕ್ಷಾತ್ಕರಿಸಿ ಎಂಡೋಸಲ್ಫಾನ್ ಹೆಸರಿನಲ್ಲಿ ನಾವು ಭೂತಾಯಿಗೆ ಸಲ್ಲಿಸಿದ ಕೊಡುಗೆಯನ್ನು ಕಣ್ಣಿಗೆ ಕುಕ್ಕುವಂತೆ ಈ ಕಾದಂಬರಿ ತೋರಿಸುತ್ತಿದೆಯೋ ಹಾಗೆಯೇ ದೇವನಗರಿಯಲ್ಲಿ ಇವತ್ತು ಕಾಣುತ್ತಿರುವುದಕ್ಕೂ ಅದರದ್ದೇ ಆದ ಒಂದು ಪರಂಪರೆಯಿರುತ್ತದೆ. ಭೂತಕಾಲದ ಚರಿತ್ರೆ ಇರುತ್ತದೆ. ಯಾವುದನ್ನೂ ನಾವು ಐಸೊಲೇಟ್ ಮಾಡಿ ನೋಡಲು ಸಾಧ್ಯವಿಲ್ಲ ಮತ್ತು ಬಹುಶಃ ಹಾಗೆ ನೋಡಲೂ ಕೂಡದು. ಮತಾಂತರದ ಹೆಸರಿನಲ್ಲಿ ಇಲ್ಲಿ ನಡೆದ ದುರಾಚಾರ, ಕಮ್ಯುನಿಸಂ ಹೆಸರಿನಲ್ಲಿ ನಡೆದ ಕೊಲೆಗಳು, ಹಣದ ಬೆಂಬತ್ತಿ ಕಡಿದುರುಳಿಸಿದ ಕಾಡು, ರಬ್ಬರ್, ಶುಂಠಿ ಎಂದು ಮರುಳುಗಾಡಾದ ಭೂಮಿ, ಕಡಲ ತೀರದ ದಂಧೆಗಳು ಎಲ್ಲವೂ ಯಾವ ಧರ್ಮ/ಇಸಮ್ಮುಗಳ ಹಂಗಿಲ್ಲದ ಪ್ರಕೃತಿಗೆ ಕೇವಲ ಮನುಷ್ಯನ ಅಹಂಕಾರದ ರುದ್ರನರ್ತನವಷ್ಟೇ ಆಗಿರುತ್ತದೆ. ಎಂಡೋಸಲ್ಫಾನ್ ಎಲ್ಲೆಲ್ಲಿ ಉಪಯೋಗಿಸಲ್ಪಟ್ಟಿದೆಯೋ ಅಲ್ಲೆಲ್ಲಾ ಇದೇ ಬಗೆಯ ದುಷ್ಪರಿಣಾಮ ಆಗಿದೆಯೇ ಎನ್ನುವ ದಿಸೆಯಲ್ಲಿ ನೋಡಿದರೆ ಭಾರತದ, ಅದರಲ್ಲೂ ಕೇರಳದ ಮಟ್ಟಿಗೆ ಮಾತ್ರ ದುರಂತದ ಚಿತ್ರ ಕಣ್ಣಿಗೆ ರಾಚುತ್ತದೆ ಎನ್ನುವುದು ಕೂಡ ನಿಜವೇ. ಇದನ್ನೆಲ್ಲ ಪ್ರಾಫೆಟಿಕ್ ಆಗಿ ನೋಡುತ್ತಿದ್ದೇನೆಂದು ತಿಳಿಯುವ ಅಗತ್ಯವಿಲ್ಲ. ಪ್ರಕೃತಿಗೊಂದು ನಿಯಮವಿದೆ, ಅದು, ನಾವು ಅದಕ್ಕೇನು ಮಾಡುತ್ತೇವೋ ಅದನ್ನೇ ಅದು ನಮಗೆ ಮಾಡುತ್ತದೆ! ದೇವರ ಸ್ವಂತ ನಾಡಾದ ಕೇರಳದಲ್ಲಿ ನಡೆಯುತ್ತಿರುವುದನ್ನೆಲ್ಲ ನಾವು ಒಂದು ಸ್ವಸ್ಥ ಮನಸ್ಸಿನಿಂದ ಅರ್ಥಮಾಡಿಕೊಂಡರೆ ಅದರಲ್ಲಿ ಇಡೀ ಮನುಕುಲದ ಹಿತವಿದೆ. ಈ ನೆಲೆಯಿಂದಲೂ ಕಾಸರಗೋಡಿನ ನೆಲದಿಂದ ಬಂದ ಈ ಕಾದಂಬರಿಗೆ ವಿಶೇಷವಾದೊಂದು ಮಹತ್ವವಿದೆ.

ಇಲ್ಲಿನ ಕಥೆ ಹಲವು ತಲೆಮಾರುಗಳ ಕತೆಯಾಗಿಯೂ, ಕಾಲಘಟ್ಟಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಕತೆಯಾಗಿಯೂ, ಜೀವನಶೈಲಿಯಲ್ಲಿನ ಪಲ್ಲಟಗಳ ಕತೆಯಾಗಿಯೂ, ಹಲವು ರಂಗಗಳಲ್ಲಿ ನಡೆದ ವಿದ್ಯಮಾನಗಳ ಕತೆಯಾಗಿಯೂ, ಪರಿಸರದ ದುರಂತಕತೆಯಾಗಿಯೂ ದಾಖಲಾಗುವುದರೊಂದಿಗೆಯೇ ಮನುಷ್ಯ ಸಂಬಂಧಗಳ, ಭಾವನೆಗಳ, ಮೌಲ್ಯಗಳ ಕತೆಯಾಗಿಯೂ ಕೂಡ ನಿಲ್ಲುತ್ತದೆ. ಒಂದು ನೆಲೆಯಿಂದ ನೋಡಿದರೆ ಶೇಖರ-ಶಿವರಾಮರ ಬಾಲ್ಯದಿಂದ ತೊಡಗಿ ವೃದ್ಧಾಪ್ಯದ ವರೆಗಿನ ಅಪೂರ್ವ ಸ್ನೇಹದ ಕಥಾನಕ ಇದು. ಇನ್ನೊಂದು ನೆಲೆಯಿಂದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ನಿರ್ವಹಿಸುವ ಪಾತ್ರವನ್ನು, ಗಂಡು ಕುಸಿದಾಗ ಅವಳೇ ಕುಟುಂಬದ ಸಾರಥ್ಯವನ್ನು ವಹಿಸಿಕೊಂಡು ನಿರ್ವಹಿಸುವ ಅವಳ ಧೈರ್ಯವನ್ನು ಹೇಳುವ ಕಥಾನಕ ಕೂಡ. ಅದು ರಾಧಮ್ಮನಿಂದ ತೊಡಗಿ ಹರಿಣಾಕ್ಷಿಯ ತನಕ ಮತ್ತೆ ಮತ್ತೆ ಕಣ್ಣಿಗೆ ಕಟ್ಟುತ್ತಲೇ ಇರುತ್ತದೆ.

ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ, ಸಾಂಗತ್ಯದಲ್ಲೇ. ಅದು ಹರಿಣಾಕ್ಷಿಯ ಬದುಕಿಗೆ ಒಂದು ಸುಪ್ತ ಸಾಪೇಕ್ಷವನ್ನೊದಗಿಸುವಂತೆ ಮೂಡಿಬಂದಿರುವುದರಲ್ಲೇ ಈ ಭಾಗದ ಒಟ್ಟಾರೆ ಸಾರ್ಥಕತೆಯಿದೆ. ಕೊಂಚ ರೂಪಕದ ಭಾಷೆಯಲ್ಲಿ, ಪ್ರತಿಮಾ ವಿಧಾನವನ್ನು ನೆಚ್ಚಿಕೊಂಡು ಸುಂದರವಾಗಿ ಮೂಡಿ ಬಂದಿರುವ ಈ ಭಾಗದಲ್ಲಿ ಗಂಗೆ, ಕಾಶಿ, ಮೃತ್ಯುಪ್ರಜ್ಞೆ, ಆಧ್ಯಾತ್ಮ ಎಲ್ಲವೂ ಮೇಳೈಸಿದೆ. ಇಲ್ಲಿ ಕಾಶಿಯಲ್ಲಿ ಜಯಂತ, ಮಹೇಂದ್ರ, ಬಲ್ಲಾಳರು – ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಅನುಭೂತಿಯಾಗುತ್ತದೆ. ಅದರ ಅರ್ಥವೇನೆಂಬುದಕ್ಕಿಂತ ಹೆಚ್ಚು ಮಹತ್ವದ ಪ್ರಶ್ನೆ, ಈ ಬದುಕಿನ ಅರ್ಥವೇನೆಂಬುದೇ. ನಮ್ಮ ಬದುಕು ಕೂಡಾ ನಮಗೆ ಸರಿಯಾಗಿ ಅರ್ಥವಾಗುವುದರೊಳಗೆ ಒಂದು ಕ್ಷಣಭಂಗುರ ಅನುಭೂತಿಯಂತೆ ಕಣ್ಮರೆಯಾಗಿ ಬಿಡುತ್ತದೆ.

ಒಂದು ಅದ್ಭುತವಾದ ಜೀವನದರ್ಶನದ ಕಥಾನಕವನ್ನು ಕಾದಂಬರಿಯಾಗಿ ಕಟ್ಟಿಕೊಟ್ಟ ಅನುಪಮಾ ಪ್ರಸಾದ್ ಅವರಿಗೆ ಅಭಿನಂದನೆಗಳು.